ದಶಗಣ ಸಿಂಗಿದೇವಯ್ಯ
ಕಾಲ ಸು.1160.  ಶಿವಶರಣ, ವಚನಕಾರ ಬಸವಣ್ಣನವರ ಸಮಕಾಲೀನ.  ಲಕ್ಕಣ್ಣದಂಡೇಶ ಮೊದಲಾದ ಅನೇಕ ವೀರಶೈವ ಕವಿಗಳು ಈತನನ್ನು ಹೆಸರಿಸಿದ್ದಾರೆ.  ಈತ ಹಾಗೂ ಬೊಮ್ಮಸೆಟ್ಟಿ, ಸಂಗವ್ವೆ, ದೇವರಸ, ಬಸವಯ್ಯ, ಬಾಚಿದೇವ ಮೊದಲಾದವರು ತೇರಸರೆಂದು ಪ್ರಸಿದ್ಧಿ ಪಡೆದಿದ್ದಾರೆ.

ಈತ ತನ್ನ ವಚನಗಳ ಅಂಕಿತದಲ್ಲಿ ತನ್ನ ಗುರುವಾದ ನಾಚಯ್ಯನ ಹೆಸರನ್ನೂ ಸೇರಿಸಿಕೊಂಡಿದ್ದಾನೆ.  ಉಪಲಬ್ಧವಿರುವ ಇವನ ಕೆಲವೇ ವಚನಗಳಲ್ಲಿ ಅರ್ಪಣಾಭಾವ.  ನಿಃಸ್ವಾರ್ಥತೆ ಗುರುಭಕ್ತಿಗಳನ್ನು ಕಾಣಬಹುದು.  ಉದಾಹರಣೆಗೆ ಒಂದು ವಚನ : 
        ಸತಿಸುತ ಮಾತಾಪಿತರಿಗೆಂದು ಹಡೆದಡೆ ನಿಮ್ಮಾಣೆ ಕಂಡಯ್ಯ
        ಮಾನವ ಸೇವೆ ಮಾಡಿದಡೆ ನಿಮ್ಮಾಣೆ ಕಂಡಯ್ಯ
        ನೀವಲ್ಲದನ್ಯಕ್ಕೆರಗಿದಡೆ ನಿಮ್ಮಾಣೆ ಕಂಡಯ್ಯ
        ಎನ್ನ ಸತಿಯಲ್ಲದನ್ಯಸತಿಗಳುಪಿದಡೆ ನಿಮ್ಮಾಣೆ ಕಂಡಯ್ಯ
        ತನುಮನ ವಂಚನೆಯಾದಡೆ ನಾಚಯ್ಯ ಪ್ರಿಯ ಮಲ್ಲಿನಾಥಯ್ಯ
                                   ನಿಮ್ಮಾಣೆ ಕಂಡಯ್ಯ.				
(ಕೆ.ಆರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ